Sunday 21 August 2016

ಸೂರ್ಯೋದಯ



ಕಣ್ತುಂಬಿಕೊಳ್ಳುವುದಕ್ಕಾಗಿ,
ಪರ್ವತವನ್ನು ಏರಿದರು,ಶರಧಿಯ ಪದತಲದಲ್ಲಿ ಹೊರಳಾಡಿದರು,
ನಯನದೊಂದಿಗೆ ಮತ್ಯಾವುದರಲ್ಲೋ ಕಾಣುವುದಕ್ಕೆ ಹಂಬಲಿಸಿದರು,
ಭಾವದಲ್ಲಿ ಸ್ಥಾಯಿಯಾದ,
ಊರ್ಧ್ವಮುಖಿಯನ್ನು ಪದಗಳಲ್ಲಿ ಹಿಡಿಯಲೆತ್ನಿಸಿದರು,
ಮೇಲೇರುವ ಅವನನ್ನು ತಮ್ಮ ಅರಿವಿನ ಪರಿಧಿಯೊಳಗೆ ಸಿಲುಕಿಸುವ,
ಕಾತರ...ಹಂಬಲ...ಪ್ರಯತ್ನಕ್ಕೆ ಕೊನೆಯೆಲ್ಲಿಯದು?
ಯಾರವನು...?

ಕತ್ತಲು,ನಿದ್ರೆ,ಕನಸನ್ನು ಕೊಲ್ಲುವ ಕೊಲೆಗಾರನೋ?
ತನ್ನೊಂದಿಗೆ ಸರ್ವರನ್ನೂ ಎಚ್ಚರಿಸುವ ಸ್ವಾರ್ಥಿಯೋ?
ನಿಶಾಚರಿಗಳ ದ್ವೇಷಿಯೋ?
ದಿನಕ್ಕೊಂದು ಸಮಯದಲ್ಲಿ ಏಳುವ ಕಾಲದ ಪರಿವಿಲ್ಲದವನೋ?
ಅಥವಾ,
ಶಶಿಗೆ ಪ್ರಭೆಯನ್ನು ನೀಡಿ,
ಆತನ ಶಕ್ತಿ ಕುಂದಿದಾಕ್ಷಣ ಬರುವ ಪ್ರಾಣ ಸ್ನೇಹಿತನೋ?
ಲೌಕಿಕತೆಯನ್ನು ನಾಶ ಮಾಡುವ ದೇವನೋ?
ಪ್ರೇರೇಪಿಸುವ ಶಕ್ತಿಯೋ?
ಯಾರಿರಬಹುದು?
ಇವೆಲ್ಲವೂ ಒಬ್ಬನೇ ಆದ ಅವಿನಾಶಿಯೇ?
ಗೊತ್ತಿಲ್ಲ...!

ಎಷ್ಟೋ ನಕ್ಷತ್ರದಂತಹ ಜನರಲ್ಲಿ ಅವನೊಬ್ಬನಂತೆ...
ಸೂರ್ಯ ಎನ್ನುತ್ತಾರಂತೆ...
ಬೆಳಕು ನೀಡುವುದೇ ಕಾಯಕವಂತೆ!
ಅರಿವು ನೀಡುವವರೆಲ್ಲಾ ಸೂರ್ಯರಾದಾರೇ?
ಯಾರಿಗೆ ಯಾವ ನಕ್ಷತ್ರ...?ಯಾರು ಸೂರ್ಯ...?
ಅವನ ಉದಯಕ್ಕಾಗಿಯೇ ಎಲ್ಲರ ಕನವರಿಕೆ...!



{ ಮೈಸೂರು ವೈದ್ಯಕೀಯ ಕಾಲೇಜಿನವರು ಆಯೋಜಿಸಿದ್ದ,'ಕನ್ನಡ ಕವಿತೆ' ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಬಹುಮಾನ ಬಂದ ಕವಿತೆ}

ಕನಸಿನ ಕನವರಿಕೆ



ನೀರವ ರಾತ್ರಿ,
ಕಮರಿದ ಚಂದ್ರ,
ಕರಾಳ ಮೌನದ ಸಾಮ್ರಾಜ್ಯ,
ಅದನ್ನು ತುಳಿಯುತ್ತಾ ಅವಳು ಹೊರಟಳು…
ಕತ್ತಲಲ್ಲಿ ಕರಗುತ್ತಾ,ಕತ್ತಲಲ್ಲಿ ಒಂದಾಗಬೇಕೆಂದು ಬಯಸುತ್ತಾ…
ಸಮಯದ ಹಂಗಿಲ್ಲ,ಬೆಳಕಿನ ಹಂಬಲವಿಲ್ಲ..
ಆದರೆ...
ಇದ್ದಕ್ಕಿದ್ದಂತೆ,
ಪ್ರಖರವಾಗಿ ತಿವಿದಂತಾಯಿತು,
ಬೆಳಕಂತೆ!
*****
ಇವ ಕಣ್ತೆರದ….
ಅವಳು ಕಾಣಲಿಲ್ಲ…
ಹುಡುಕುತ್ತಾ ಹೊರಟ…
ಅದೇ ರಾತ್ರಿ…ಕತ್ತಲು…ಮೌನ…
ಏನೋ ಕಂಡಂತಾಯಿತು!
ಅವಳೇ,ಅವಳೇ…
*****
ಇನ್ನೆಲ್ಲೋ ಯಾರೋ ಕಣ್ಣುಬಿಟ್ಟರು...
ಇವ ಮಾಯವಾದ...!
ಅವರು ಹೊರಟರು,ಇವನನ್ನು ಅರಸುವುದಕ್ಕಂತೆ!!!
*****


Friday 3 June 2016

ಗೋಧಿ ಬಣ್ಣ,ಸಾಧಾರಣ ಮೈಕಟ್ಟು-ಅನಿಸಿಕೆ



 ವಾಸ್ತವತೆಯ  ಚೌಕಟ್ಟಿನೊಳಗೇ ನಿಂತು ತಂದೆ ಮತ್ತು ಮಗನ ಸಂಬಂಧವನ್ನು ಹಾಗೆಯೇ ಸಮಕಾಲೀನ ಸಮಸ್ಯೆಗಳನ್ನು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಬಿಡಿಸಿಡುತ್ತಾ ಹೋಗುತ್ತದೆ.ಇದ್ದಾಗ ಪ್ರೀತಿಸದೆ,ಕಳೆದುಕೊಂಡ ಮೇಲೆ ಅವರ ಬೆಲೆ ಅರಿತು ತಂದೆಯನ್ನು,ಅವರ ಪ್ರೀತಿಯನ್ನೂ ಹುಡುಕುತ್ತಾ ಸಾಗುವ ಮಗುವಿನ ಕತೆ ನಮ್ಮೊಳಗೇ ಒಂದಾಗಿ ಹೋಗುತ್ತದೆ.

ಚಿತ್ರದ ಮೊದಲಾರ್ಧದ ನಿರೂಪಣೆ ಸೊಗಸಾಗಿದೆ.ದ್ವಿತೀಯಾರ್ಧದಲ್ಲಿ ಚಿತ್ರದ ವೇಗ ಸ್ವಲ್ಪ ಹೆಚ್ಚಿಸುವ ಕೆಲಸವನ್ನು ನಿರ್ದೇಶಕರು ತೋರಬಹುದಿತ್ತು.ಹಿನ್ನಲೆ ಸಂಗೀತ ಹಾಗೂ ಹಾಡುಗಳು ಸೊಗಸಾಗಿವೆ.ಛಾಯಾಗ್ರಹಣ ಸುಂದರವಾಗಿದ್ದರೂ ವೈವಿಧ್ಯತೆ ಕಾಣಸಿಗುವುದಿಲ್ಲ.ಸಂಭಾಷಣೆಯೂ ಗಮನ ಸೆಳೆಯುತ್ತದೆ.

ತಂದೆಯಾಗಿ ಅಭಿನಯಿಸಿರುವ ಅನಂತ್'ನಾಗ್'ರವರು ಇನ್ನಿಲ್ಲದಂತೆ ಕಾಡಬಲ್ಲರು.ಆ ಪಾತ್ರಕ್ಕೆ ಅಷ್ಟು ಶಕ್ತಿಯಿದೆ.ರಕ್ಷಿತ್ ಶೆಟ್ಟಿ ಹಾಗೂ ಶೃತಿ ಹರಿಹರನ್ ನಟನೆ ಚೆನ್ನಾಗಿದೆ.ದತ್ತಣ್ಣ,ವಸಿಷ್ಟ ಎನ್ ಸಿಂಹ ಹಾಗೂ ಅಚ್ಯುತ್ ಕುಮಾರ್'ರನ್ನು ಒಳಗೊಂಡಂತೆ ಇತರರ ಅಭಿನಯವೂ ಸುಂದರ.
ಸದಭಿರುಚಿಯ ಚಿತ್ರಗಳ ಸಾಲಿಗೆ ಸೇರಿಸಬಹುದಾದ ಈ ಚಿತ್ರಕ್ಕೆ ನೋಡುಗರು ನಿಸ್ಸಂಶಯವಾಗಿ ಜೈ ಅನ್ನಬಹುದು...

ಚಿತ್ರದ ಒಂದು ಸಂಭಾಷಣೆಯಲ್ಲಿ ಬರುವ ಮಾತು...."ನಾವು ಹುಟ್ಟಿದ ತಕ್ಷಣ ನಮ್ಮ ಕತೆ ಪ್ರಾರಂಭ ಆಯ್ತು ಅಂತ ತಿಳ್ಕೊಳ್ತೀವಿ ಆದರೆ ನಿಜವಾಗ್ಲೂ ಯಾರದ್ದೋ ಕತೆಯಲ್ಲಿ ನಾವೊಂದು ಪಾತ್ರ ಆಗಿರ್ತೀವಿ..."

ನೋಡಿದ ಮೇಲೆ 'ಮನದ ಮೂಲೆಯಲ್ಲೆಲ್ಲೋ ಅಡಗಿ ಕುಳಿತ ಭಾವಗಳೆಲ್ಲಾ ಕತೆಯ ರೂಪದಲ್ಲಿ ಮತ್ತೊಮ್ಮೆ ಶುರುವಾಗಬಹುದು'

Sunday 29 May 2016

ಏಕತಾರಿ

       

      "ಯಾಕೋ ಹಾಗೆ ಹೇಳ್ತೀಯಾ,ಸುಮ್ನೆ ಕೂತ್ಕೊಂಡು ನೋಡ್ತಾ ಇರು.ಆಮೇಲೂ ಏನೂ ಅರ್ಥ ಆಗ್ಲಿಲ್ಲ ಅಂದ್ರೆ..."ನೀನು ವ್ಯರ್ಥವೆಂಬಂತೆ ನೋಡಿದಳು.
     ನಾನು ಮೌನವಾಗಿದ್ದೆ.ಪ್ರೀತಿ ಮಾತನಾಡುವ ಲಹರಿಯಲ್ಲಿದ್ದಳು.ಆಕೆಯೆ ಮಾತಿನ ಚುಂಬಕ ಶಕ್ತಿಗೆ ಮರುಳಾಗದವರಾರು?ನನ್ನನ್ನ್ನು ಭಾವನೆಗಳಿಗೆ ಸ್ಪಂದಿಸುವ ಮನುಷ್ಯನನ್ನಾಗಿ ಮಾಡಿದ್ದೇ ಪ್ರೀತಿ.ಮೂಲತಃ ಮಲೆನಾಡಿನವನಾದ ನನಗೆ ನಿಸರ್ಗವೆಂದರೆ ಅಷ್ಟಕಷ್ಟೇ.ಅಂದರೆ ಪ್ರಕೃತಿ ದ್ವೇಷಿಯಲ್ಲ,ಅದರ ಏಕತಾನತೆ ರೇಜಿಗೆ ಹುಟ್ಟಿಸಿತ್ತಷ್ಟೇ.ಒಂದರ್ಥದಲ್ಲಿ ನಿಸರ್ಗದ ಕೌತುಕತೆಯನ್ನು ಹುಡುಕುವ ಕುತೂಹಲವನ್ನು ಕಳೆದುಕೊಂಡಿದ್ದೆ.ಈ ಭಾವ ದೈನಂದಿನ ಬದುಕಿನಲ್ಲೂ ನನಗರಿವಿಲ್ಲದಂತೆಯೇ ಬೆಳೆದಿತ್ತು.
     ಈಗ್ಗೆ ಎರಡು ತಿಂಗಳ ಕೆಳಗೆ ಪ್ರೀತಿಯ ಪರಿಚಯವಾದದ್ದು.ನಾನು ಸ್ನಾತಕೋತ್ತರ ಪದವಿ ಮುಗಿಸಿ ಸಂಶೋಧನೆಗೆಂದು ಒಬ್ಬರ ಬಳಿ ತೊಡಗಿಸಿಕೊಂಡ ಸಮಯದಲ್ಲೇ ಪ್ರೀತಿಯೂ ಬಂದು ಸೇರಿಕೊಂಡಳು.ಸಮವಯಸ್ಕರೆಂದಿದ್ದದ್ದು ನಾನು ಮತ್ತು ಈಕೆ ಮಾತ್ರ.ಉಳಿದವರೆಲ್ಲ ಹಿರಿಯರಾದ್ದರಿಂದ ಸಹಜವಾಗಿಯೇ ಆಪ್ತರಾದೆವು.ನನಗೆ ಮೊದಲಿನಿಂದಲೂ ಅಂತರ್ಮುಖಿಯಾಗಿದ್ದು ಅಭ್ಯಾಸ.ಇತರರೊಂದಿಗೆ ಭಾವನಾಸ್ತರದಲ್ಲಿ ವ್ಯವಹರಿಸುವುದು ಆಗದ ಮಾತು.ಆದರೆ ಪ್ರೀತಿ ಹಾಗಲ್ಲ.ಎಲ್ಲರೊಂದಿಗೆ ಬೆರೆಯುವ,ಇತರರನ್ನು ಆಕರ್ಷಿಸುವ ಗುಣವನ್ನು ಹೊಂದಿದ್ದಳು.ನಗುವೇ ಆಕೆಯ ಗುಣವನ್ನು ಸೂಚಿಸುತ್ತಿತ್ತು.ಕ್ರಮೇಣ ನನ್ನನ್ನು ಯಾವ ಪರಿ ಆವರಿಸಿದಳೆಂದರೆ,ಎಲ್ಲವನ್ನೂ ನಿಶ್ಚೇತನವಾಗಿ ಕಾಣುತ್ತಿದ್ದ ನನ್ನಲ್ಲಿ ಒಂದು ಚೈತನ್ಯವನ್ನು ತುಂಬಿದಳು.
     "ಪ್ರತೀ ವಸ್ತು,ಜೀವಿ ಎಲ್ಲವಕ್ಕೂ ಆಂತರಿಕ ಮತ್ತು ಬಾಹ್ಯ ಸೌಂದರ್ಯ ಇರತ್ತೆ ಕಣೋ..ಹಾಗೆಯೇ ಒಂದಷ್ಟು ಕೌತುಕವೂ...ಬರೀ ಬಾಹ್ಯ ಸೌಂದರ್ಯಕ್ಕೆ ಸೀಮಿತವಾಗ್ಬೇಡ."ಇಂದಿಗೂ ನೆನಪಿದೆ.ಆಕೆ ಅಂದು ಹೇಳಿದ್ದ ಮಾತುಗಳೇ ನನ್ನ ಬದಲಾವಣೆಗೆ ಹೇತುವಾದದ್ದು.ನನ್ನ ಬದುಕು,ಜೀವನದ ಬಗೆಗಿನ ಒಂದು ದೃಷ್ಟಿಕೋನದಿಂದ ಮತ್ತೊಂದು ಕಡೆಗೆ ಹೊರಳಿತು.ಜೀವನದ ಸೌಂದರ್ಯ ಅರಿವಾಗತೊಡಗಿತು.
     ವಿಹರಿಸಿಕೊಂಡು ಬರೋಣವೆಂದು ಸಂಜೆ ಸಮುದ್ರ ತಟಕ್ಕೆ ಬಂದ ನಮ್ಮ ನಡುವೆ ನಾನೇ ಮಾತು ತೆಗೆದಿದ್ದೆ."ಈ ಸೂರ್ಯಂಗೆ ಬೇಜಾರಾಗಲ್ವ...ದಿನಾಲೂ ಬಂದು ಹೋಗ್ತಾನೆ.ನಂಗಂತೂ ಇವ್ನನ್ನು ನೋಡಿದ್ರೆ ಪಾಪ ಅಂತ ಅನ್ನಿಸುತ್ತೆ."ಹೀಗೆ ಹೇಳಿದ್ದಕ್ಕೇ ಪ್ರೀತಿ ನೀನು ವ್ಯರ್ಥವೆಂಬಂತೆ ನನ್ನನ್ನು ನೋಡಿ ಮೇಲಿನಂತೆ ಹೇಳಿದ್ದು.
     ನನ್ನ ಮನಸ್ಥಿತಿ ಆಕೆಗೆ ಬೇಸರ ತರಿಸಿರಬೇಕು ಎಂದುಕೊಂಡು ಅಸ್ತಮಿಸುವ ಸೂರ್ಯನನ್ನು ನೋಡುತ್ತಾ ಕುಳಿತೆ.ನನ್ನದೇನೂ ಕವಿ ಹೃದಯವೇ;ಸೂರ್ಯನನ್ನು ನೋಡಿದಾಗ ಏನಾದರೂ ಅನ್ನಿಸಲು.ಏನೂ ತೋಚುತ್ತಿಲ್ಲ,ಈಕೆ ಮಾತನಾಡುತ್ತಿಲ್ಲ.ಮೌನದಲ್ಲಿ ಕುಳಿತಿರುವ ಪ್ರೀತಿಯನ್ನು ನೋಡುವುದೇ ಒಂದು ಖುಷಿ ನನಗೆ.ಈಕೆ ಇಷ್ಟೊಂದು ಗಹನವಾಗಿ ಕುಳಿತಿದ್ದರಿಂದ ಏನೋ ಹೇಳುತ್ತಾಳೆಂದು ಖಾತ್ರಿಯಾಯಿತು.
     ನೀಳವಾದ ಉಸಿರು ತೆಗೆದುಕೊಂಡು,"ಈ ಭೂಮಿ ಮತ್ತು ಸೂರ್ಯರ ನಡುವೆ ಎಷ್ಟೊಂದು ಪ್ರೀತಿ...!ನಾಳೆ ತಮ್ಮೀರ್ವರ ಭೇಟಿ ಆಗುತ್ತೆ ಅನ್ನುವ ವಿಶ್ವಾಸವೇ ಅವರೀರ್ವರೂ ಬದುಕುವಂತೆ ಮಾಡಿದ್ದು ಅಂತ ಅನ್ನಿಸುತ್ತೆ.ನೋಡು,ನಾಳೆ ಪುನಃ ಬರುವ ಸೂರ್ಯನೇ ಇಂದು ಅಗಲಬೇಕಾದ ವಿರಹದಲ್ಲಿ ವ್ಯಥೆಪಟ್ಟು ವ್ಯಥೆಪಟ್ಟು ಕೆಂಪಾಗಿದ್ದಾನೆ.ಭೂಮಿಯ ಅಳು,ಬೇಸರಕ್ಕೆ ಸಾಕ್ಷಿಯಾಗಿ ಹೋದ ಕಣ್ಣೀರಂತೆ ಈ ಸಮುದ್ರ.ನಾಳೆ ಪುನಃ ಬರುವವರೆಗೂ ಈಕೆಯ ಅಳು,ಆತನ ಬೇಸರ ಕಳೆದಿರುತ್ತದೆಯೇ...ಈ ದಿನ ಸಂಜೆ ಎಷ್ಟು ಕೆಂಪಾಗಿ ಮರೆಯಾಗಿದ್ದಾನೋ ನಾಳೆ ಬೆಳಗ್ಗೆಯೂ ಅಷ್ಟೇ ಕೆಂಪಗಿರುತ್ತಾನೆ;ಈಕೆಯೂ ಕೂಡಾ.ಹಾಗಂತ ಈರ್ವರ ಬೆಳಗಿನ ಚೈತನ್ಯವನ್ನು ಯಾವುದಕ್ಕಾದರೂ ಹೋಲಿಸಲಾದೀತೇ?ಸಮಯ ಕಳೆದ ಹಾಗೇ ತನ್ನನ್ನು ತಾನು ಸೂರ್ಯನಿಗೆ ತೆರೆದುಕೊಳ್ಳುವ ಭೂಮಿ,ಪ್ರಸನ್ನನಾಗಿ ಭೂಮಿಯನ್ನು ಬೆಳಗುವ ಸೂರ್ಯ..."ಆಳವಾಗಿ ಉಸಿರು ಬಿಟ್ಟಳು.ನನ್ನಿಂದ ತಿರುಗಿ ಮಾತಿರಲಿಲ್ಲ.ಮಾತು ಬೇಕಾಗಿಯೂ ಇರಲಿಲ್ಲ.ಪ್ರೀತಿಯ ಮಾತುಗಳು ನನ್ನನ್ನು ಯಾವುದೋ ಲಹರಿಗೆ ಒಯ್ದಿತ್ತು."ಇಷ್ಟು ಪ್ರೀತಿ ಇರುವವರು ಕೇವಲ ಕಣ್ಣುಗಳಲ್ಲೇ ಮಾತನಾಡಿಕೊಳ್ಳುತ್ತಾರಲ್ಲಾ...!" ತನ್ನನ್ನು ತಾನೇ ಪ್ರಶ್ನಿಸಿಕೊಂಡದ್ದೋ ಅಥವಾ ನನಗೆ ಕೇಳಿದ್ದೋ ತಿಳಿಯಲಿಲ್ಲ.ಉತ್ತರ ಹುಡುಕುವ ಆಸ್ಥೆಯೂ ಇರಲಿಲ್ಲ.ಅಳುವಿನಂತೆ ಕೇಳುತ್ತಿರುವ ಕಡಲ ಭೋರ್ಗರೆತ ಬಿಟ್ಟು ಮತ್ತಾವ ಸದ್ದೂ ಕರ್ಣ ಪಟಲವನ್ನು ಭೇದಿಸುತ್ತಿರಲಿಲ್ಲ.ಸೂರ್ಯ ಸಂಪೂರ್ಣ ಮರೆಯಾದ ನಂತರ ಕಾಲುಗಳು ಹೆಜ್ಜೆ ಹಾಕತೊಡಗಿದವು;ಬೆಳಕನ್ನರಸುತ್ತಾ...

********

     ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಾ ಕುಳಿತಿದ್ದೆ.ಎರಡು ವರ್ಷವಾಯಿತು,ಸೂರ್ಯ ಮರೆಯಾಗುವ ಗಳಿಗೆಯನ್ನು ತಪ್ಪಿಸಿಕೊಂಡವನಲ್ಲ.ಪ್ರೀತಿಯ ಪರಿಚಯವಾದ ಮೇಲೆಯೇ ಸಂಜೆಯ ವಿಹಾರ ದಿನಚರಿಯ ಭಾಗವಾಗಿ ಹೋದದ್ದು.ಅದೇ ಸೂರ್ಯ,ಅದೇ ಭೂಮಿ,ಅದೇ ವಿಶ್ವಾಸ,ಅದೇ ಪ್ರೀತಿ...ಎಂದಾದರೂ ಬತ್ತೀತೇ?ಯೋಚಿಸುತ್ತಿರುವಾಗಲೇ ಪ್ರೀತಿ ಕಣ್ಣ ಮುಂದೆ ಹಾದು ಹೋದಂತಾಯಿತು.
      ಯಾಕೋ ಇತ್ತೀಚೆಗೆ ಪ್ರೀತಿ ಅಂದರೆ ಒಂದು ರೀತಿಯ ಪುಳಕ.ಒಲವೋ,ಸ್ನೇಹವೋ...ವಿಶ್ಲೇಷಿಸುವ ಸಾಮರ್ಥ್ಯ ನನಗಿಲ್ಲ.ಹಾಗಂತ ಆಕೆಯ ಹೊರತಾದ ಬದುಕನ್ನು ಕಲ್ಪಿಸಿಕೊಳ್ಳುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದೇನೆ.ಸಂಬಂಧಗಳ ಇನ್ನೊಂದು ಮಜಲಿಗೆ ನನ್ನನ್ನು ನಾನು ತೆರೆದುಕೊಳ್ಳಬೇಕು,ಪ್ರೀತಿಯೊಂದಿಗೆ...ರೆಕ್ಕೆ ಬಂದಂತಾಯಿತು,ಹೀಗೆ ಎಣಿಸಿದಾಗಲೆಲ್ಲ ರೋಮಾಂಚನ,ವರ್ಣಿಸಲಸಾಧ್ಯ.ಆಕೆಗೂ ನನ್ನ ಮೇಲೆ ಪ್ರೇಮವಿರಬಹುದೇ...ನನ್ನ ಬಳಿ ಅಷ್ಟೊಂದು ಆಪ್ತವಾಗಿರುತ್ತಾಳಲ್ಲ..ಇರಬಹುದು...ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರವನ್ನು ನಾನೇ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೆ.
     ಎಲ್ಲವಕ್ಕೂ ವಿರಾಮವನ್ನಿಡುವಂತೆ ಪ್ರೀತಿ ಬಂದು ಕುಳಿತಳು.ಹೌದು,ಇಂದು ಸಂಜೆ ಕರೆ ಮಾಡಿದ್ದಳು."ಇವತ್ತು ಸಂಜೆ ಸಿಕ್ಕೋ..ನಿಂಗೆ ಏನೋ ಹೇಳ್ಬೇಕು."ಆ ಒಂದು ಕರೆಯೇ ಕನಸುಗಳನ್ನು ಕಟ್ಟಲು ಮೂಲವಾಗಿದ್ದು.ತಾಯಿಗೆ ಮೈ ಸರಿ ಇಲ್ಲವೆಂದು ಹೇಳಿ ಈಕೆ ಮೊದಲಿನಂತೆ ವಿಹಾರಕ್ಕೆ ಬರುತ್ತಿರಲಿಲ್ಲ.ಇತ್ತೀಚೆಗೆ ಸಂಶೋಧನಾ ಕೆಂದ್ರದಲ್ಲೂ ಕಾಣಸಿಗುತ್ತಿರಲಿಲ್ಲ.ಒಂದು ತಿಂಗಳ ಹಿಂದೆ 'ನಾನಿನ್ನು ಬಿಡಬೇಕೆಂದಿದ್ದೇನೆ.ಮನೆಯ ಕೆಲಸವೇ ಜಾಸ್ತಿ,ಹೊಂದಿಸಿಕೊಂಡು ಹೋಗುವುದು ಕಷ್ಟ.ಅಪ್ಪಂಗೂ ನಿವೃತ್ತಿಗೆ ಮೂರು ವರ್ಷವಷ್ಟೇ ಬಾಕಿ.ಕೆಲಸ ಹುಡುಕಬೇಕು.ಅಮ್ಮಂಗೂ ಮೈ ಸರಿ ಇಲ್ಲ.ಮೊದಲು ಬದುಕುವುದಕ್ಕೆ ದಾರಿ ಕಂಡುಕೊಳ್ಳಬೇಕು.ಸಂಶೋಧನೆ ಮುಂದೆ ಯಾವಾಗಲಾದರೂ ಮುಗಿಸುತ್ತೇನೆ"ಎಂದು ಉಸಿರಿದ್ದಳು.ಈಕೆಯ ಮನೆಯ ಪರಿಸ್ಥಿತಿ ತಿಳಿದ ನಾನೂ ಹ್ಞೂಂಗುಟ್ಟಿದ್ದೆ..ಆಮೇಲಾಮೇಲೆ ಅಪರೂಪಕ್ಕೊಮ್ಮೆ ಸಿಗುತ್ತಿದ್ದಳು.ಇಂದು ಈಕೆಯೇ ಬಂದು ಕುಳಿತಿದ್ದಾಳೆ.
     ಪ್ರೀತಿಯ ಈ ಮುಖಭಾವ ಕಂಡದ್ದು ಇದೇ ಮೊದಲು.ಎಂದಿನಂತೆ ಅವಳೇ ಮಾತಿಗೆ ತೊಡಗಿದಳು."ಇನ್ನು ಎಷ್ಟು ವರ್ಷ ಬೇಕು ಸಂಶೋಧನೆ ಮುಗಿಯಲು?"ಈ ಪ್ರಶ್ನೆ ಈಗ ಏಕೆ ತೂರಿಬಂತೆಂದು ಅರ್ಥವಾಗಲಿಲ್ಲ.ಎಂದಿನಂತೆ ನೇರ ಮಾತಿಗಿಳಿದಿಲ್ಲ,ಸುತ್ತಿ ಬಳಸುತ್ತಿದ್ದಾಳೆ.ನಾನೆಣಿಸಿದಂತೆ ..... ಇರಬಹುದೆಂದು ಮನಸ್ಸು ಹೇಳುತ್ತಿತ್ತು."ಗೊತ್ತಿಲ್ಲ,ಇನ್ನೊಂದು ತಪ್ಪಿದರೆ ಮತ್ತರ್ಧ ವರ್ಷ"ಎಂದೆ."
     ಹ್ಞ್ಂ...ನನಗೆ ಬೆಂಗ್ಳೂರಲ್ಲಿ ಕೆಲಸ ಸಿಕ್ತು..ಇನ್ನೆರಡು ವಾರಕ್ಕೆ ಮನೆ ಖಾಲಿ ಮಾಡ್ತಾ ಇದೀವಿ.ಇಲ್ಲಿ ಏನೂ ಇರಲ್ಲ.ಇದ್ದ ಒಂದು ಮನೇನೂ ಮಾರ್ತೀವಿ.ಎಲ್ಲಾ ಬೆಂಗಳೂರಿಗೆ...ಅಮ್ಮನ ಆರೋಗ್ಯ ನೋಡಿಕೊಳ್ಲಿಕ್ಕೂ ಸಹಾಯ ಆಗತ್ತೆ" ಮಾತಿನಲ್ಲಿ ಎಂದಿನ ಚೈತನ್ಯವಿರಲಿಲ್ಲ.ಮೊದಲ ಬಾರಿಗೆ ಆಕೆಯ ಮಾತಿಗೆ ಕಿವಿ ಕಿವುಡಾಗುತ್ತಿತ್ತು.ಮಾತಿಗೆ ಹ್ಞೂಂಗುಟ್ಟುವುದೂ ಎಲ್ಲೋ ನಿಂತು ಹೋಗಿತ್ತು.ನನ್ನ ಮುಖವನ್ನೇ ನೋಡುತ್ತಿದ್ದಳು.ನನಗೆ ಆಕೆಯ ಮುಖವನ್ನು ನೋಡುವ ಶಕ್ತಿಯನ್ನು ಆಕೆಯ ಯಾವುದೋ ಮಾತು ಕಸಿದುಕೊಂಡಿತ್ತು.ಯಾವುದು,ಯಾಕೆ ಎಂದು ತಿಳಿಯಲಿಲ್ಲ.ಎರಡು ವರ್ಷದ ಹಿಂದೆ ಕುಳಿತಿದ್ದ ಅಂತರ ಈಗ ದುಪ್ಪಟ್ಟಾಗಿತ್ತು.ಮನಸ್ಸಿನಲ್ಲಿ...?ಗೊತ್ತಿಲ್ಲ.
     ಅರೆ!ಪ್ರೀತಿಯ ಅಗಲುವಿಕೆ ಏಕೆ ಇಷ್ಟೊಂದು ಆಘಾತ ತರುತ್ತಿದೆ ಎಂದು ಆಶ್ಚರ್ಯವಾಯಿತು.ಪ್ರೀತಿಯ ಮೇಲೆ ನಿಜವಾಗಿ ಒಲವು ಮೂಡಿತ್ತೇ..?ಉತ್ತರವಿಲ್ಲದ ಪ್ರಶ್ನೆ ಇದು.ಆಕೆಗೆ..?ಇದೂ ಉತ್ತರವಿಲ್ಲದೇ ಸೊರಗುತ್ತಿತ್ತು.ಆಕೆಯ ಕಣ್ಣುಗಳಲ್ಲಿ ಪ್ರೀತಿಯನ್ನು ಹುಡುಕಹೊರಟು ಸೋತಿದ್ದೆ.ನಾನಾಗೇ ಹೇಳಲಿಲ್ಲ;ಆಕೆಯೂ.
     ಎರಡು ವರ್ಷಗಳಲ್ಲಿ ಜೊತೆಯಾದ ಕ್ಷಣಗಳು ಕಣ್ಣೀರಿನೊಂದಿಗೆ ಕರಗುತ್ತಿದ್ದವು.ಆಕೆಯಲ್ಲೂ ಅದೇ ಭಾವವೇನೋ...ಆಕೆಯೂ ತಲೆ ತಗ್ಗಿಸಿದ್ದಳು.ಪರಸ್ಪರ ಮುಖವನ್ನು ನೋಡುವ ಧೈರ್ಯ ಬರಲಿಲ್ಲ.
     "ನಿನ್ನೊಂದಿಗೆ ಕಳೆದ ಕ್ಷಣಗಳು ಖುಶಿ ಕೊಟ್ಟಿತ್ತು.ಇನ್ನು..."ಗದ್ಗದಿತಳಾದಳು.ನನ್ನ ಬಾಯಿಂದ ಮಾತು ಹೊರಡುತ್ತಿಲ್ಲ.ಆಕೆಯ ಮೇಲೆ ಒಲವು ಮೂಡಿದ್ದೇ ಹೌದಾದರೆ ಹೇಳಿ ಉಳಿಸಿಕೊಳ್ಳಲೇ?ಮನಸ್ಸಿಗಿದ್ದ ಕ್ರಿಯಾಶೀಲತೆ ದೇಹಕ್ಕಿರಲಿಲ್ಲ.
     "ದೇವರ ಇಚ್ಚೆ ಇದ್ದರೆ, ಇನ್ನೆಂದಾದರೂ ಸಿಗೋಣ" ತಿರುಗಿ ನಡೆದ ಪಾದಗಳೊಂದಿಗೆ,ಕಟ್ಟಿದ್ದ ಕಂಬನಿಗಳೂ ಜಾರಿ ನೆಲದಲ್ಲಿ ಅಸ್ತಿತ್ವ ಹುಡುಕಿಕೊಂಡವು.ನನಗೂ ಗೊತ್ತು,ಕೊನೆಯ ಮಾತು ನಡೆಯದೇ ಇದ್ದರೂ,ಮನಸ್ಸಿನಾಳದಿಂದಲೇ ಬಂದದ್ದುಎಂದು.
     ಎದ್ದು ಹೋಗಿ ಕೈ ಹಿಡಿದು ಕರೆತಂದು ಕೂರಿಸಿಕೊಳ್ಳಲೇ...?
     ನಾನು ಯಾರು ತಡೆಯುವುದಕ್ಕೆ...?ನಾನೇನಾದರೂ ಆಕೆಗೆ ಪ್ರೇಮ ನಿವೇದನೆ ಮಾಡಿದ್ದೇನೆಯೇ ಅಥವಾ ಆಕೆಯೇ ಮಾಡಿದ್ದಾಳೆಯೇ..?ಇಲ್ಲವಲ್ಲ.ಕೇವಲ ಹತ್ತಿರವಾದದ್ದಕ್ಕೆ ಯಾವ ಹಣೆಪಟ್ಟಿ ನೀಡಲಿ..
     ನನಗೂ ಗೊತ್ತು,ಈ ಮಾತುಗಳು ಆಕೆಯ ಅಗಲುವಿಕೆಯ ನೋವನ್ನು ಮರೆಮಾಚಲು ಹೇಳಿಕೊಳ್ಳಬಹುದಾದಂಥವುಗಳು.ಅಷ್ಟಕ್ಕೂ ಒಲವು ಮಾತಿನಲ್ಲೋ...ಮೌನದಲ್ಲೋ...?
     ಉತ್ತರ.....?
     ಪರಸ್ಪರ ಸಮಾನಾಂತರವಾಗಿ,ಕಣ್ಣಿಗೆ ಕಣ್ಣು ಕೊಟ್ಟಿದ್ದ ಭೂಮಿ,ಸೂರ್ಯ ದೂರಾಗುತ್ತಿದ್ದರು.ಪರಿಣಾಮವಾಗಿ ಸೂರ್ಯ ನೋವಿನಿಂದ ಕೆಂಪಾಗಿದ್ದ.ಭೂಮಿಯ ವೇದನೆಯ ಕುರುಹೆಂಬಂತೆ ಸಾಗರದ ಅಲೆಯ ಸಪ್ಪಳ ಜೋರಾಗುತ್ತಿತ್ತು...ಇಬ್ಬರ ಬದುಕನ್ನು ಹಿಡಿದಿಟ್ಟಿರುವುದು ನಾಳೆ...ನಾಳೆಯ ಬೆಳಗು.....

********




( ಏಪ್ರಿಲ್ 17 ,2016 ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಕತೆ)

[ಚಿತ್ರ ಕೃಪೆ google]

Tuesday 1 March 2016

'ಯುರೇಕ'....!!!

   






 


     ಕನಸುಗಳನ್ನು ಬಗಲಲ್ಲಿ ಹೊತ್ತು ಕಾಲೇಜಿಗೆ ಬಂದ ನನಗೆ ಪ್ರತೀ ಕ್ಷಣವೂ ಹೊಸ ಅನುಭವವೇ...ಪಾಠವೇ...ಸಾಧ್ಯವಾಗುವಷ್ಟನ್ನು ಬೊಗಸೆಯಲ್ಲಿ ಹಿಡಿಯುತ್ತಾ,ಬೇಕೆನಿಸಿದ್ದು-ಬೇಡವಾದದ್ದು ಎಲ್ಲವನ್ನೂ ತಲೆಯಲ್ಲಿ ಶೇಖರಿಸುತ್ತಾ ಸಾಗುತ್ತಿದ್ದೆ.ಕಾಲದಿಂದ ಬೇರ್ಪಟ್ಟು,ಅದನ್ನು ಮುಂದೆ ತಳ್ಳುತ್ತಾ ಅದರ ಹಿಂದೆ ಸಾಗುತ್ತಿದ್ದ ನನಗೆ,ಕಾಲವನ್ನೂ ಜೊತೆಯಲ್ಲಿಯೇ ಹೊತ್ತುಕೊಂಡು ಹೋಗುವ ಅನಿವಾರ್ಯತೆಯೂ ಉಂಟಾಯಿತು...ಒಂದು ರೀತಿಯಲ್ಲಿ ಅವಕಾಶವೂ...
     ಗತಿಸಿದ ವರ್ಷಗಳಿಂದ ಹೆಕ್ಕಿ ತೆಗೆದ ನೆನಪುಗಳನ್ನು ಪ್ರಸ್ತುತದ ಘಟನೆಗಳಿಗೆ ಹೋಲಿಸಿ ಹಳೆಯದನ್ನು ಕಂಡುಕೊಳ್ಳುವ ಅಥವಾ ಮರುಪಡೆದುಕೊಳ್ಳುವ, ಆ ನೆನಪುಗಳಿಗೆ ಜೀವ ನೀಡಿ ,ಜೀವಕ್ಕೆ ಮರು ಚೈತನ್ಯ ನೀಡುವ ಕೆಲಸ ಯಾವಾಗಲೂ ನಾನು ನಡೆಸಿರುವಂಥದ್ದೇ.ಆದರೆಜಾತ್ರೆಯ ಸಡಗರದಿಂದ ತೊಡಗಿಕೊಂಡು,ಅಷ್ಟೇ ಮುತುವರ್ಜಿಯಿಂದ ಅದರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ ಶಾಲಾ ವಾರ್ಷಿಕೋತ್ಸವದ ನೆನಪುಗಳು ಮರುಕಳಿಸೀತೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.
     ಆ ಸಡಗರವನ್ನು ಮೀರಿಸಿ ,ಆ ನೆನಪುಗಳ ಜಾಗದಲ್ಲಿ ತನ್ನನ್ನು ತಾನು ಮರುಸ್ಥಾಪಿಸಿಕೊಳ್ಳದೇ...ಹೊಸದಾದ ಅನುಭವಕ್ಕೆ,ಜವಾಬ್ದಾರಿಗಳಿಗೆ ನನ್ನನ್ನು ಎಳೆದುಕೊಂಡಿದ್ದು'ಯುರೇಕ'....!!!
     ಹೌದು.'ಯುರೇಕ' ಯುವರಾಜ ಕಾಲೇಜಿನ ವಿಜ್ಞಾನ ಹಬ್ಬ.ಕಳೆದುಹೋಗುತ್ತಿರುವ ಮೂಲ ವಿಜ್ಞಾನದ ನೆಲೆಯನ್ನು ಹುಡುಕುತ್ತಾ ಅದನ್ನು ಕಂಡುಕೊಳ್ಳುವ ನೆಲೆಯಲ್ಲಿ ಸಾಗುತ್ತಿರುವ ನಮ್ಮ ಕಾಲೇಜಾದ ಯುವರಾಜದ ಒಂದು ವಿಭಿನ್ನ,ವಿಶಿಷ್ಟ ಪ್ರಯತ್ನ.
     'ಯುರೇಕ' ನಮಗೆ ಇನ್ನೂ ಪೂರ್ತಿ ತೆರೆದುಕೊಳ್ಳದ,ಅದರ ಭಾಗ ನಾವು ಎಂಬುದಷ್ಟೇ ನಮಗೆ ಗೊತ್ತಿರುವ,ಸಾಧ್ಯವಾದಷ್ಟನ್ನು ಅದರಿಂದ ನಾವು ದಕ್ಕಿಸಿಕೊಳ್ಳಬಹುದು ಎಂದುಕೊಂಡಿರುವ ಹಬ್ಬ.ಈ ಹಿಂದೆಯೇ 'ಯುರೇಕ'ದೊಂದಿಗೆ ಜೊತೆಯಾದವರು ತಾವು ಕಂಡ ವರ್ಷದೊಡನೆ ಹೋಲಿಸಿ ಹೇಳಬಹುದು...ಆದರೆ ನಮಗೆ ಹಾಗಲ್ಲ ! ಈ ಬಾರಿ ನಾವು ಎಷ್ಟು ಜಾಸ್ತಿ ಅದರಿಂದ ಪಡೆಯುತ್ತೇವೆಯೋ ಅಷ್ಟೂ ನಮ್ಮ ಸ್ವತ್ತೇ ಆಗುತ್ತದೆ,ಸಾಲದ್ದಕ್ಕೆ ಈ ಬಾರಿ ರಾಜ್ಯಮಟ್ಟದ ಆಯೋಜನೆ ಬೇರೆ...!ಇದಕ್ಕಿಂತ ಸಂತೋಷ ಬೇರೆ ಉಂಟೇ...?ವಿಜ್ಞಾನಕ್ಕೆ ಸಂಬಂಧಪಟ್ಟ ಸ್ಪರ್ಧೆಗಳು,ಆಟಗಳು...ಇನ್ನೂ ಏನೇನೋ...ನನಗಂತೂ ಭಯಂಕರ ಕುತೂಹಲ ಉಂಟು,ಕಾತರ ಉಂಟು...ಕಾಯುವಿಕೆ ಕೇವಲ ಮೂರು ದಿನ...ನಂತರದ ಎರಡು ದಿನಗಳು ಹಬ್ಬ.ಹಬ್ಬದಲ್ಲಿ ಒಳಗೊಳ್ಳದ ವಿಷಯ ಏನಿದೆ ಹೇಳಿ..?
     ನೆನಪಿನ ಬುತ್ತಿಯನ್ನು ಹೊತ್ತು ಮನೆಯೆಡೆಗೆ ಮೆರವಣಿಗೆ ಮಾಡಬಹುದೆಂಬ ವಿಶ್ವಾಸದಲ್ಲಿ ಉಳಿದ ಮೂರು ದಿನಗಳ ದೂಡುವಿಕೆಯಷ್ಟೇ....... :)



Sunday 28 February 2016

Some'ಬಂಧ'...

 
                                             (ಚಿತ್ರ ಕೃಪೆ google)




     ಕಷ್ಟಪಟ್ಟು ಗಳಿಸಿಕೊಂಡ ಸಂಬಂಧಗಳಿಗೆ ಹೆಚ್ಚು ಬೆಲೆ.ಅದರಲ್ಲಿ ಪ್ರೀತಿಯ ಹೊಳೆಯ ಅಲೆಯೂ ಜಾಸ್ತಿಯೇ.ಆ ಸಂಬಂಧಗಳನ್ನು ಜೀವನದುದ್ದಕ್ಕೂ ಕಾಪಾಡಿಕೊಳ್ಳುವುದು ನಿಜವಾಗಿಯೂ ಸವಾಲು ಅಥವಾ ಅದುವೇ ಜೀವನವಾ?
     ಎಷ್ಟೋ ಮಂದಿ ಸಂಬಂಧಗಳ ಬೆಲೆ ಅರಿಯದೇ,ಮುರಿದುಕೊಳ್ಳುತ್ತಾರೆ.ಕಾಲ ಸಾಗುತ್ತದೆ.ಮನೆ-ಮನಸುಗಳು ಒಂದಾಗಲಾರದು.ವಾಸ್ತವವಾಗಿ ಹೀಗೆ ಆಗಲು ಯಾರೂ ಇಷ್ಟಪಡಲಾರರು.ಆದರೆ ಆಗುವುದನ್ನು ತಡೆಯಲು ಸಾಧ್ಯವಾಗುವಂತಹ ನಡವಳಿಕೆಯಲ್ಲಿ ವ್ಯವಹರಿಸಲು ಅವರು ಒಲ್ಲರು.
     ಎಂದು ಪ್ರತಿಷ್ಠೆಗೆ ಅಂತ್ಯ ಬೀಳುತ್ತದೋ ಅಲ್ಲಿ ಪ್ರೀತಿಯ ಅರಮನೆ ಏಳುತ್ತದೆ.ಇದು ಮಾತ್ರ ಸತ್ಯ.ಹೀಗಾಗಿಯೇ ಗಳಿಸಿಕೊಂಡ ಸಂಬಂಧವನ್ನು ಕಡೆಯವರೆಗೂ ಕಾಪಾಡುವ ಜವಾಬ್ದಾರಿ ನಮ್ಮದ್ದು.....


Friday 12 February 2016

ನ್ಯಾನೊ ಕತೆ-೧

ಪಾಠ

ನಾನು ಓದುತ್ತಿದ್ದಾಗ ಮೇಷ್ಟ್ರ ಕೊರೆತ ತಡೆಯಲಾರದೆ ತರಗತಿಯಲ್ಲೇ ಮಲಗುತಿದ್ದೆ ಎಂದು ಆತ ತನ್ನ ವಿದ್ಯಾರ್ಥಿಗಳಿಗೆ ಹೇಳುವಾಗ ಅರ್ಧ ತರಗತಿ ನಿದ್ರೆಗೆ ಜಾರಿತ್ತು….!

Saturday 23 January 2016

'ರಿಕ್ಕಿ' ನನಗೆ ತೆರೆದುಕೊಂಡಂತೆ



ನಿರ್ಮಾಣ: ಎಸ್.ವಿ ಬಾಬು
ಕಥೆ-ಚಿತ್ರಕಥೆ-ನಿರ್ದೇಶನ: ರಿಶಬ್ ಶೆಟ್ಟಿ
ಛಾಯಾಗ್ರಹಣ : ವೆಂಕಟೇಶ್ ಅಂಗುರಾಜ್
ಸಂಗೀತ : ಅರ್ಜುನ್ ಜನ್ಯ
ಸಂಕಲನ : ಎನ್.ಎಮ್ ವಿಶ್ವ
ತಾರಾಗಣ : ರಕ್ಷಿತ್ ಶೆಟ್ಟಿ , ಹರಿಪ್ರಿಯಾ, ವೀಣಾ ಸುಂದರ್, ಅಚ್ಯುತ್ ಕುಮಾರ್,
ಪ್ರಮೋದ್ ಶೆಟ್ಟಿ, ರವಿ ಕಾಳೆ, ಶಶಿಕಲಾ, ಸಾಧುಕೋಕಿಲಾ, ಮಂಜುನಾಥ್,
ದಿನೇಶ್ ಮಂಗಳೂರು, ರಘು ಪಾಂಡೇಶ್ವರ ಮತ್ತು ಇತರರು.  
   
     ಒಂದು ಚಿತ್ರ ಚಿತ್ರಮಂದಿರದಾಚೆಗೂ ಕಾಡತೊಡಗಿ,ಅದರೊಂದಿಗೆ ಚಿಂತನೆಗೆ  ದಾರಿ ಮಾಡಿಕೊಡುತ್ತದೆ ಎಂದಾದರೆ ಅದು ಗೆದ್ದಿದೆ ಎಂದೇ ಅರ್ಥ.'ರಿಕ್ಕಿ'ಯೂ ಈ ಸಾಲಿನಲ್ಲಿ ನಿಲ್ಲಬಲ್ಲ ಸಾಮರ್ಥ್ಯ ಪಡೆದಿದೆ.
    ಚಿತ್ರದ ಮೊದಲಿನಿಂದ ಕೊನೆಯವರೆಗೂ ಕಾಡುವುದರಲ್ಲಿ ಮೊದಲನೆಯದು ಸಂಭಾಷಣೆ.ಭಾವನಾ ಸ್ತರದಲ್ಲೇ ಚಿತ್ರದ ಸಂಭಾಷಣೆಗಳು ಸಾಗುತ್ತಾ ಹೋಗುತ್ತವೆ;ಆಪ್ತವಾಗುತ್ತವೆ.ಪಂಚ್ ಡೈಲಾಗ್'ಗಳಿಗೆ ಸೀಮಿತಗೊಳ್ಳದೇ ಸಾಹಿತ್ಯಿಕವಾಗಿ ಸಾಗುವ ,ಪ್ರಾದೇಶಿಕ ಸೊಗಡಿನೊಂದಿಗೆ ಮಿಳಿತವಾಗಿರುವ ಕಾರಣದಿಂದ ಬೇಗನೇ ಕಥೆಯೊಳಗೆ ನಮ್ಮನ್ನು ಎಳೆದುಕೊಳ್ಳುತ್ತದೆ.
     ಯಾವುದೋ ಲಹರಿಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಪಡೆದಿರುವುದು ಮೊದಲಾರ್ಧದ ಪ್ರೇಮ ಕಥೆ.ಪ್ರೇಮಿಗಳು ಆಡುವ ಮಾತಿಗಿಂತ ಅವರ ನಡುವಿನ ಮೌನಕ್ಕೆ ಹೆಚ್ಚು ಬೆಲೆ ಎಂಬುದನ್ನು ಸಮರ್ಥವಾಗಿ ತೆರೆಯ ಮೇಲೆ ತಂದಿರುವ ನಿರ್ದೇಶಕರ ಜಾಣ್ಮೆಗೆ ತಲೆದೂಗಲೇಬೇಕು.ಚಿತ್ರದ ಛಾಯಾಗ್ರಹಣ ಸುಂದರ.ಸಂಗೀತವೂ ಗುನುಗಿಕೊಳ್ಳುವಂತೆ ಇದೆ.
     ದ್ವಿತೀಯಾರ್ಧ ಪ್ರೇಕ್ಷಕರನ್ನು ಹಿಡಿದಿಡುತ್ತದೆ.ಕಥೆಗೆ ಕೊಟ್ಟಿರುವ ತಾರ್ಕಿಕ ಅಂತ್ಯ ವ್ಯವಸ್ಥೆಗೆ ಹಿಡಿದ ಕನ್ನಡಿ.ಸಮಾಜದಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶವಿಲ್ಲದ್ದು ದುರಂತವೇ.ಹಾಗಿದ್ದೂ ಚಿಂತನೆಗೆ ಹಚ್ಚುವಂತೆ ಮಾಡಿ ಚಿತ್ರ ಗೆದ್ದದ್ದೂ ಇಲ್ಲೆಯೇ.
     ನಟನೆಯಲ್ಲಿ ರಕ್ಷಿತ್ ಶೆಟ್ಟಿಗಿಂತ ಹರಿಪ್ರಿಯಾಗೆ ಜಾಸ್ತಿ ಅಂಕ.ಉಳಿದವರ ಅಭಿನಯವೂ ಮನೋಜ್ಞವಾಗಿದೆ.
     ಚಿತ್ರದ ಓಘಕ್ಕೆ ತಡೆಯೊಡ್ಡುವುದು ಅನಾವಶ್ಯಕವಾದ ಸಾಧುಕೋಕಿಲಾರ ಪಾತ್ರ.ಅವರ ಅಭಿನಯದ ಬಗ್ಗೆ ಮಾತಿಲ್ಲದಿದ್ದರೂ ಚಿತ್ರಕ್ಕೆ ಅವರ ಅವಶ್ಯಕತೆಯೇ ಇರಲಿಲ್ಲವಾದ್ದರಿಂದ ತಾಳ್ಮೆ ಪರೀಕ್ಷೆಯಾಗುತ್ತದೆ.
   
     ಒಂದು ಭಿನ್ನ ಕಥೆಯ,ಬದುಕಿನ ದುರಂತದವನ್ನು ತೋರಿಸುವ 'ರಿಕ್ಕಿ'ಗೆ ಒಮ್ಮೆ ಜೈ ಅನ್ನಬಹುದು...ಹಾಗೆಯೇ ಇದೇ ತಂಡದಿಂದ ಇನ್ನೂ ಉತ್ತಮ ಚಿತ್ರಗಳನ್ನು ಬಯಸುವುದು ಅತಿಶಯೋಕ್ತಿಯಾಗಲಾರದು…
     

Thursday 21 January 2016

ಚುಟುಕುಗಳು

ಚುಟುಕು-೩



       ಯಾರು ಏನೇ ಹೇಳಲಿ|
       ಇತರರಿಗೆ ಹೋಲಿಸಿ,
       ನಿನ್ನ ನಾ ಕಳೆಯಲಾರೆ!!!

ಚುಟುಕುಗಳು

ಚುಟುಕು-೨






     ನೆಲೆಸಿದುದಕೆ|ಸೌಂದರ್ಯ ತುಂಬೊ|
     ಜಾರುವ ಮುನ್ನ||